ಮೆಹಂದಿಯ ಚಿತ್ತಾರ

Mehandi

ಮೆಹಂದಿ (ಗೋರಂಟಿ) ಎಂದ ತಕ್ಷಣ ನೆನೆಪಿಗೆ ಬರುವುದು ಮದುವಣಗಿತ್ತಿಯ ಕೈಗಳಲ್ಲಿ ಮೂಡಿರುವ ಚಿತ್ತಾಕರ್ಷಕ ಚಿತ್ರ ವಿನ್ಯಾಸ. ಒಂದೊಮ್ಮೆ ಮೆಹೆಂದಿ ಬಿಡಿಸುವುದು ಹವ್ಯಾಸೀ ಕಲೆಯಾಗಿದ್ದದ್ದು, ಈಗ ಹಣ ಗಳಿಸುವ ಒಂದು ಉತ್ತಮ ವೃತ್ತಿಯಾಗಿದೆ.

ಹಿಂದೆ ಮೆಹಂದಿ ಎಲೆಗಳನ್ನು ಕಿತ್ತು ತಂದು, ನುಣ್ಣಗೆ ರುಬ್ಬಿ, ಸಣ್ಣ ಕಡ್ಡಿಗಳ ಸಹಾಯದಿಂದ ಅಂಗೈಗೆ ಹಚ್ಚಿಕೊಳ್ಳುತ್ತಿದ್ದರು, ಕಾಲ ಬದಲಾದಂತೆ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ನೀರು ಮತ್ತು ನೀಲಗಿರಿ ತೈಲದಿಂದ ಕಲಸಿ ಕೋನಿನ ಮೂಲಕ ಹಾಕುವ ವಿಧಾನ ರೂಢಿಗೆ ಬಂದಿತು.

ಈಗ ಅಂಗಡಿಗಳಲ್ಲಿ ಮೆಹೆಂದಿ ಕೋನ್ ರೆಡಿಮೇಡ್ ರೂಪದಲ್ಲಿ ಸಿಗುವುದರಿಂದ ಯಾವ ವೇಳೆಯಲ್ಲಾದರೂ ತಂದು ಹಾಕಿಕೊಳ್ಳಬಹುದು. ಆದರೆ ಮೆಹೆಂದಿ ಕೋನನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.

ತಯಾರಿಸುವ ವಿಧಾನ

ಮೆಹೆಂದಿ ಎಲೆಗಳನ್ನು ಒಣಗಿಸಿ ನುಣ್ಣಗೆ ಪುಡಿ ಮಾಡಿ ತೆಳುವಾದ ಬಟ್ಟೆಯಿಂದ ಜರಡಿ ಹಿಡಿದು. ಅದನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಹಾಕಿ, ಅದಕ್ಕೆ ಸ್ವಲ್ಪ ನೀರು, ನೀಲಗಿರಿ ತೈಲ ಸೇರಿಸಿ ತುಂಬ ಮಂದಕ್ಕೂ ಅಲ್ಲದೆ ತೆಳ್ಳಗೂ ಇಲ್ಲದಂತೆ ಸಾಧಾರಣ ರೂಪದಲ್ಲಿ ಕಲಸಿಡಿ.

ನಂತರ ಹಾಲಿನ ಕವರ್ ಅಥವಾ ಸ್ವಲ್ಪ ದಪ್ಪ ಇರುವ ಪ್ಲಾಸ್ಟಿಕನ್ನು ಚೌಕಕ್ಕೆ ಕತ್ತರಿಸಿ (ನಾಲ್ಕು ಭಾಗ ಸಮವಾಗಿ ಇರುವಂತೆ) ಅದನ್ನು ಪೊಟ್ಟಣದ ರೂಪದಲ್ಲಿ ಕಟ್ಟಿ, ಕಲಸಿದ ಮಿಶ್ರಣವನ್ನು ತುಂಬಿ, ನಂತರ ತುದಿಗೆ ಒಂದು ದಾರ ಅಥವಾ ರಬ್ಬರ್ ಬ್ಯಾಂಡ್ ಹಾಕಿ, ಸುತ್ತಲೂ ಚೆಲ್ಲದಂತೆ ಗಮ್ ಟೇಪಿನಿಂದ ಭದ್ರ ಪಡಿಸಿ. ಅದನ್ನು ಎರಡು ಅಥವಾ ಮೂರು ಗಂಟೆಯ ಮೊದಲೇ ಕಲಸಿ ತುಂಬಬೇಕು.


MehandiOnHand
ಹಚ್ಚುವ ವಿಧಾನ:

ಮೊದಲು ಯಾವ ಭಾಗಕ್ಕೆ ಹಾಕಬೇಕೋ ಆ ಭಾಗಕ್ಕೆ ನಿಲಗಿರಿ ತೈಲದಿಂದ ಸವರಿ, ನಂತರ ಬೇಕಾದ ವಿನ್ಯಾಸದಲ್ಲಿ ಮೆಹಂದಿಯನ್ನು ಕೋನಿನ ಸಹಾಯದಿಂದ ಹಾಕಬೇಕು. ಮಧ್ಯ ಮಧ್ಯ ಒಣಗಿದ ತಕ್ಷಣ ನಿಂಬೆಹಣ್ಣಿನ ರಸಕ್ಕೆ ಸ್ವಲ್ಪ ಸಕ್ಕರೆ ಬೆರೆಸಿ ಮೆಹೆಂದಿ ಹಾಕಿರುವ ವಿನ್ಯಾಸಕ್ಕೆ ಹಚ್ಚುತ್ತಿರಬೇಕು. ಈ ರೀತಿ ಮಾಡುವುದರಿಂದ ಮೆಹೆಂದಿ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ. ಮೂರು ನಾಲ್ಕು ಗಂಟೆಯ ತನಕ ಹಾಗೇ ಬಿಟ್ಟು ನಂತರ ನೀರಿನಲ್ಲಿ ತೊಳೆಯದೆ ಕೊಬ್ಬರಿ ಎಣ್ಣೆ ಅಥವಾ ಕಡಲೆ ಎಣ್ಣೆಯನ್ನು ಚಿನ್ನಾಗಿ ಸವರಿ ಚಮಚದಿಂದ ತೆಗೆಯಬೇಕು.

ಮೆಹಂದಿಯನ್ನು ತೆಗೆಯುವ ಮುನ್ನ ಕಾದ ಹೆಂಚಿನ ಮೇಲೆ ಲವಂಗ ಪುಡಿ ಹಾಕಿ ಅದರ ಹೊಗೆಯನ್ನು ತೆಗೆದುಕೊಂಡರೆ ಕೈ ಕಾಲುಗಳಿಗೆ ಹಾಕಿದ ಬಣ್ಣ ತುಂಬ ದಿನಗಳ ತನಕ ಇರುವುದು.

ದಿಢೀರ್ ಮೆಹಂದಿ

ಇತ್ತೀಚೆಗೆ ರಾಸಾಯನಿಕಗಳನ್ನು ಬಳಸಿ ವಿವಿಧ ವಿನ್ಯಾಸಗಳ ಅಚ್ಚಿನ ಸಹಾಯದಿಂದ ಮೆಹಂದಿ ಹಾಕುವ ಕ್ರಮ ಪ್ರಚಾರದಲ್ಲಿದೆ. ಈ ಕ್ರಮವು ತ್ವರಿತವಾಗಿರುವುದು ಆದರೆ ಬಣ್ಣ ಹೆಚ್ಚು ದಿನಗಳ ಕಾಲ ಇರುವುದಿಲ್ಲ.

ಈ ರಾಸಾಯನಿಕ ಮೆಹಂದಿಯನ್ನು ಉಪಯೋಗಿಸಬೇಕಾದರೆ ಪರಿಣಿತರಿಂದ ಮಾಹಿತಿ ಪಡೆದೇ ಪ್ರಯೋಗಿಸಬೇಕು. ಈ ರಾಸಾಯನಿಕ ಪ್ರಮಾಣ ಸ್ವಲ್ಪ ಹೆಚ್ಚು ಕಡಿಮೆಯಾದರೂ ಅದು ಚರ್ಮಕ್ಕೆ ಹಾನಿಕಾರಕ. ಕೈಗವಸುಗಳನ್ನು ಅಗತ್ಯವಾಗಿ ಬಳಸಬೇಕು.

MehandiOnHands